ಮಿದುಳು ಬಳ್ಳಿ - 
ಬೆನ್ನುಮೂಳೆಯಲ್ಲಿ ಸುರಕ್ಷಿತವಾಗಿ ಅಡಕವಾಗಿರುವ ಕೇಂದ್ರ ನರಮಂಡಲ ಭಾಗ (ಸ್ಪೈನಲ್ ಕಾರ್ಡ್). ಬೆಳ್ಳಗೆ ಬೆಣ್ಣೆಯಂತೆ ಮೃದುವಾಗಿ ಬೆನ್ನುಮೂಳೆಯಲ್ಲಿ ಕಿರುಬೆರಳುಗಾತ್ರದ ಹಗ್ಗದಂತಿದೆ. ಪ್ರಾಣಿಗಳಲ್ಲಿ ಕಟುಕ ಇದರ ತುಂಡುಗಳನ್ನು ಬೆನ್ನುಮೂಳೆಯಿಂದ ಕಿತ್ತು ಬಿಸಾಡುವುದನ್ನು ನೋಡಬಹುದು. ಇದು ಎಷ್ಟು ಸೂಕ್ಷ್ಮವಾಗಿದೆ ಎಂದರೆ ಜೀವಂತದಲ್ಲಿ ಸ್ವಲ್ಪ ಒತ್ತಿದಂತಾದರೂ ಅದಕ್ಕೆ ಗಣನೀಯ ಜಕಮ್ಮಾಗಿ ಆ ಮಟ್ಟದಿಂದ ಕೆಳಗಿನ ದೇಹಭಾಗಗಳ ಸ್ವಾಧೀನ ತಪ್ಪುವುದು. ಇದರ ಉದ್ದ ಸುಮಾರು 45 ಸೆಂಮೀ. ತೂಕ ಸುಮಾರು 30 ಗ್ರಾಮ್ ಸುತ್ತಳತೆ 33-38 ಮಿಮೀ. ಗಂಡಸರ ಬಳ್ಳಿಯ ಸರಾಸರಿ ಉದ್ದಕ್ಕಿಂತ ಹೆಂಗಸರ ಬಳ್ಳಿಯ ಸರಾಸರಿ ಉದ್ದ ಸ್ವಲ್ಪ ಕಡಿಮೆ.

	ಬಳ್ಳಿ ಬೆನ್ನಿನ ಮಧ್ಯದಲ್ಲಿ ತಲೆಬುರುಡೆಯ ಕೆಳಗಿಂದ ಉದರದ ಮೊದಲ ಕಶೇರುವಿನ ಮಟ್ಟದವರೆಗೆ ಇದೆ. ಇದು ಮತ್ತು ಇದರ ಕೆಳಭಾಗದಿಂದ ಹೊರಟು ಕುದುರೆಬಾಲದಂತಿರುವ ನರಗಳ ಗೊಂಚಲು ಒಂದರ ಮೇಲೊಂದಿರುವ 20 ಬೆನ್ನು ಮಣಿ ಕಶೇರುಗಳ ರಂಧ್ರಗಳ ಸಾಲಿನಿಂದ ರಚಿತವಾದ ಕೊಳವೆಯಲ್ಲಿವೆ.

	ಬಗ್ಗಿದರೆ ಇದರ ಮೊನಚಾದ ಕೆಳಕೊನೆ ಸ್ವಲ್ಪ ಮೇಲಕ್ಕೇರುತ್ತದೆ. ಇದರ ಮೇಲು ಕೊನೆಯ ಮೆಡ್ಯುಲ ಆಬ್ಲಾಂಗೇಟ ಎಂಬ ಮಸ್ತಿಷ್ಕ ಭಾಗದ ಮುಂದುವರಿದ ಭಾಗವೇ ಆಗಿದೆ.

	ಬಳ್ಳಿಯ ಸುತ್ತಲೂ ಮೂರು ಪೊರೆಗಳಿವೆ. ಹೊರಪೊರೆ (ಬಾಹ್ಯಪಟಲ) ಸುಲಭವಾಗಿ ಹರಿಯದಷ್ಟು ಬಿಗಿಯಾಗಿದೆ. ಮಧ್ಯದ ಪೊರೆ ಜೇಡನ ಬಲೆಯಂತೆ ನವುರಾದ ಎಳೆಗಳು. ಒಳಪೊರೆ ತೆಳುವಾಗಿ ಬಳ್ಳಿಯ ಹೊರಮೈಗೆ ಅಂಟಿಕೊಂಡಿದೆ. ಇದರಿಂದ ಹೊರಚಾಚಿಕೊಂಡು ಗರಗಸದ ಹಲ್ಲಿನಂಥ 21 ಚಾಚುಗಳು ಬಳ್ಳಿಯ ಪ್ರತಿ ಪಾಶ್ರ್ವವನ್ನು ಬೆನ್ನುಮೂಳೆನಾಳಕ್ಕೆ ಅಂಟಿಸಿ ಬಳ್ಳಿಯನ್ನು ಹೆಚ್ಚು ಅಲುಗದಂತೆ ಹಿಡಿದಿವೆ. ಬಳ್ಳಿಯ ಕೆಳಕೊನೆಯಿಂದ ಒಳಪೊರೆಯ ಎಳೆ ಕೆಳಕ್ಕೆ ಹೊರಟು ಗುದಾಸ್ಥಿಗೆ ಅಂಟಿಕೊಂಡು ಬಳ್ಳಿಯನ್ನು ಹಿಡಿದಿದೆ. ಹೊರ ಮತ್ತು ಒಳಪೊರೆಗಳ ನಡುವೆ ಬಳೆಯಂತಿರುವ ಮಧ್ಯಪೊರೆಯ ಅವಕಾಶದಲ್ಲಿರುವ ಮಸ್ತಿಷ್ಕದೊಳಗಿನ ರಕ್ತನಾಳಗಳ ಗೊಂಚಲುಗಳಿಂದ ಸ್ರವಿಸುವ ಮಸ್ತಿಷ್ಕಜಲದಲ್ಲಿ ಬಳ್ಳಿ ತೇಲುವಂಥ ವ್ಯವಸ್ಥೆಯಿದ್ದು ಬಳ್ಳಿಯ ರಕ್ಷಣೆ ಹೆಚ್ಚಿದೆ.

	ಒಟ್ಟು 31 ಜೊತೆ ಬೆನ್ನು ನರಗಳು ಈ ಬಳ್ಳಿಯಿಂದ ಹುಟ್ಟುತ್ತವೆ. ಇವುಗಳ ಪೈಕಿ 8 ಜೊತೆ ಕತ್ತಿನ ನರಗಳು; 12 ಜೊತೆ ವಕ್ಷನರಗಳು; 5 ಜೊತೆ ಉದರ ನರಗಳು, 5 ಜೊತೆ ಶ್ರೋಣಿ ನರಗಳು ಮತ್ತು 1 ಜೊತೆ ಗುದಪ್ರದೇಶ ನರಗಳು. ಪ್ರತಿಯೊಂದು ನರಕ್ಕೂ 2 ಬೇರುಗಳಿವೆ. ಮುಂದಿನ ಬೇರು ಸ್ನಾಯು ಸಂಕೋಚಕ, ಹಿಂದಿನ ಬೇರಿಗೆ ಇಂದ್ರಿಯಸಂವೇದಕ ಧರ್ಮ ಮತ್ತು ಒಳಅಂಗಗಳ ಅರಿವುಕೊಡುವ ಕ್ರಿಯೆ ಇದೆ. ಇದರಲ್ಲಿ ಒಂದು ಗಂಟು ಇದೆ. ಕೆಳ 4 ಕತ್ತಿನ ನರಗಳು ತೋಳಿನಲ್ಲೂ ಉದರದ ಮತ್ತು ಶ್ರೋಣಿಯ ನರಗಳು ಹೊಟ್ಟೆ, ಕಿಬ್ಬೊಟ್ಟೆ ಮತ್ತು ಹೆಚ್ಚಾಗಿ ಕಾಲಿನಲ್ಲೂ ವ್ಯಾಪಿಸಿವೆ. 10ನೆಯ ವಕ್ಷ ನರದ ಶಾಖೆಗಳು ಓರೆಯಾದ ಪಬ್ಬಿಯಂಥ ಪ್ರದೇಶದಲ್ಲಿ ಹೊಕ್ಕಳಿನವರೆಗೂ ವ್ಯಾಪಿಸುತ್ತವೆ. ಇದೇ ರೀತಿ ಇತರ ನರಗಳು ಬೇರೆ ಬೇರೆ ಮಟ್ಟಗಳಲ್ಲಿ ಹರಡುತ್ತವೆ.

	ವಕ್ಷಭಾಗದಲ್ಲಿ ಬಳ್ಳಿ ಸಲಾಕಿಯಂತೆ ಗುಂಡಾಗಿರುತ್ತದೆ. ತೋಳುನರಗಳು ಹೊರಡುವ ಕೆಳಕತ್ತಿನ ಭಾಗ ಮತ್ತು ಕಾಲಿನ ನರಗಳು ಹೊರಡುವ ಸೊಂಟ ಮತ್ತು ಶ್ರೋಣಿಯ ಭಾಗಗಳು ಮಿಕ್ಕಭಾಗಗಳಿಗಿಂತ ಸ್ವಲ್ಪ ದಪ್ಪವಾಗಿ ಅಂಡಾಕಾರವಾಗಿ ಅಡ್ಡವ್ಯಾಸ ಹೆಚ್ಚು ಇರುವವಾಗಿವೆ.

	ಅಡ್ಡಕೊಯ್ದ ಬಳ್ಳಿಯ ಹೋಳುಗಳನ್ನು ಪರೀಕ್ಷಿಸಿದರೆ ಮಧ್ಯೆ ಊ ಆಕಾರದ ಬೂದುಭಾಗವಿದೆ. ಇದರ ಸುತ್ತಲೂ ಬಿಳಿಯ ಭಾಗವಿದೆ. ಬೂದುಭಾಗದಲ್ಲಿ ಮುಂದಿನ ಪಕ್ಕದ ಮತ್ತು ಹಿಂದಿನ ಎರಡೆರಡು ಕೊಂಬು(ಕಂಬ)ಗಳಿವೆ. ಅಡ್ಡಕೊಯ್ತದಲ್ಲಿ ಈ ಆಕಾರವಿದ್ದರು ವಾಸ್ತವವಾಗಿ ಇದು ಮಿದುಳುಬಳ್ಳಿಯ ಉದ್ದಕ್ಕೂ ಇರುವ ರಚನೆ. ಎಡ ಹಾಗೂ ಬಲ ಅರ್ಧಗಳಲ್ಲಿ ಇರುವ ಮತ್ತು ಅಡ್ಡಕೊಯ್ತದಲ್ಲಿ ಚಂದ್ರಲೇಖೆಯಂತಿರುವ ರಚನೆಗಳನ್ನು ಉದ್ದಕ್ಕೂ ಮಧ್ಯದಲ್ಲಿ ಕೂಡಿಸುವ ಭಾಗಗಳನ್ನು ಒಳಗೊಂಡಿರುವುದು ಎನ್ನುವುದನ್ನು ಗ್ರಹಿಸಬೇಕು. ಬೂದುಭಾಗದಲ್ಲಿ ವಿಶೇಷವಾಗಿ ನರಕಣಗಳನ್ನೂ ಬಿಳಿಭಾಗದಲ್ಲಿ ವಿಶೇಷವಾಗಿ ನರತಂತುಗಳನ್ನೂ ಸೂಕ್ಷ್ಮದರ್ಶಕದಲ್ಲಿ ನೋಡಬಹುದು. ಕೋಶಗಳ ಸಂಖ್ಯೆ ಬಳ್ಳಿಯಲ್ಲಿ ಕೋಟ್ಯಂತರ. ಬಿಳಿಯ ಭಾಗ ವಿಶೇಷ ರೀತಿಯ ಮೇದಸ್ಸಿನಿಂದ ಬೆಳ್ಳಗಿದೆ; ಇದರಲ್ಲಿ ಕಣಗಳಲ್ಲದೆ ಕೋಟ್ಯಂತರ ನರತಂತುಗಳ (ಎಳೆ) ಕಟ್ಟುಗಳೂ ಇವೆ. ಒಂದೊಂದು ಎಳೆಗೂ ಬಲುತೆಳುವಾದ ಮೇದಸ್ಸಿನ ಕವಚವಿದೆ. ಎಂದೇ ಈ ಭಾಗ ಬೆಳ್ಳಗಿದೆ.

	ಮುಂದಿನ ಬೂದು ಕೊಂಬುಗಳಲ್ಲಿ ಗಸಗಸೆಯ ಕಾಲುಭಾಗದಷ್ಟಿರುವ ನರಕಣಗಳಿವೆ. ಇವು ಸ್ನಾಯು ಸಂಕೋಚಿಗಳು. ಕ್ರಿಯಾತ್ಮಕ ಕೋಶಗಳು ಇವುಗಳಿಂದ ಬಾಲದಂತೆ ಹೊರಟ ಸೂಕ್ಷ್ಮನರತಂತುಗಳಿಂದಲೇ ಬೆನ್ನು ನರಗಳ ಮುಂದಿನ ಬೇರುಗಳ ರಚನೆಯಾಗಿರುವುದು. ಇಂದ್ರಿಯ ಸಂವೇದಕತಂತುಗಳು ಚರ್ಮ, ಕೀಲು, ಸ್ನಾಯು ಮತ್ತು ಇತರ ಅಂಗಗಳಿಂದ ಹೊರಟು ಮೊದಲು ಹಿಂದಿನ ಬೇರಿನಲ್ಲಿರುವ ಅಂಡಾಕಾರದ ಕಣಗಳನ್ನು ಸೇರುತ್ತವೆ. ಇವುಗಳಿಂದ ಹೊರಟ ತಂತುಗಳು ಹಿಂದಿನ ಕೊಂಬಿನಲ್ಲಿರುವ ಸಣ್ಣಕಣಗಳನ್ನು ಸೇರುತ್ತವೆ. ಈ ಕಣಗಳ ತಂತುಗಳು ಹಿಂದಿನ ಮತ್ತು ಪಕ್ಕದ ಬಿಳಿಕಂಬಗಳಲ್ಲಿ ಹತ್ತಿ ಮಸ್ತಿಷ್ಕದಲ್ಲಿ ಬೇರೆ ಬೇರೆ ಮಟ್ಟಗಳಲ್ಲಿ ಕಣಗಳನ್ನು ಮುಟ್ಟುತ್ತವೆ. ಮುಂದೆ ಈ ಕಣಗಳ ತಂತುಗಳು ಮಸ್ತಿಷ್ಕದ ಮೇಲ್ಮೈಯನ್ನು ಸೇರುತ್ತವೆ. ಇಲ್ಲಿಯ ಕಣಗಳ ತಂತುಗಳು ಸ್ನಾಯು ಚಾಲಕ ವಿಭಾಗವನ್ನು ತಲಪಿ ಅಲ್ಲಿಂದ ಹೊರಟ ತಂತುಗಳು ಬೆನ್ನು ಬಳ್ಳಿಯ ಮುಂದಿನ ಕೊಂಬಿನಲ್ಲಿ ಬೇರೆ ಬೇರೆ ಮಟ್ಟಗಳಲ್ಲಿರುವ ಸಂಕೋಚಕ ಕಣಗಳನ್ನು ಚೋದಿಸಿ ಇವುಗಳ ಮೂಲಕ ಅನುಗುಣವಾದ ಸ್ನಾಯುಗಳು ಸಂಕುಚಿಸುವಂತೆ ಮಾಡುತ್ತವೆ. ವ್ಯಕ್ತಿ ಕೈ ಕೆಲಸ ಮಾಡಬೇಕಾದಾಗ ಆ ಇಚ್ಛೆ ಮಿದುಳಿನಲ್ಲಿ ಹುಟ್ಟಿ ಅಲ್ಲಿಂದ ಕೆಳಕ್ಕಿಳಿಯುವ ತಂತುಗಳಲ್ಲಿ ಚೋದಕಶಕ್ತಿ ಪ್ರವಾಹ ಹರಿದು ಮಿದುಳುಬಳ್ಳಿಯ ಕೆಳಕತ್ತಿನ ಭಾಗದ ಮುಂದಿನ ಕೊಂಬುಗಳಲ್ಲಿರುವ ಕಣಗಳನ್ನು ಚೋದಿಸಿ ಇವುಗಳಿಂದ ಹೊರಟ ಶಕ್ತಿ ಪ್ರವಾಹಗಳಿಂದ ತೋಳು ಮತ್ತು ಕೈಗಳ ಸ್ನಾಯುಗಳು ಯುಕ್ತವಾಗಿ ಸಂಕುಚಿಸುವಂತಾಗುತ್ತವೆ.

	ಮಿದುಳುಬಳ್ಳಿ ಅನೈಚ್ಛಿಕ ಆತ್ಮರಕ್ಷಣಾ ಶೀಘ್ರಪ್ರತಿಕ್ರಿಯೆಗಳ ಕೇಂದ್ರ (ಪ್ರೊಟೆಕ್ಟಿವ್ ರಿಫ್ಲೆಕ್ಸ್ ಸೆಂಟರ್). ಉದಾಹರಣೆಗೆ ಮುಳ್ಳುತುಳಿದರೆ ಅದು ನಮ್ಮ ಮನಸ್ಸಿಗೆ ಹತ್ತುವುದಕ್ಕೆ ಮೊದಲೇ ಕಾಲನ್ನು ಎತ್ತಿರುತ್ತೇವೆ. ಮುಳ್ಳು ಚುಚ್ಚಿದ ಸ್ಥಳದಿಂದ ಹೊರಡುವ ಸಂವೇದಕನರಗಳಲ್ಲಿ ಚೋದಕಶಕ್ತಿ ಪ್ರವಹಿಸಿ ಸಂಬಂಧಿಸಿದ ಬೆನ್ನುನರದ (ಒಂದನೆಯ ಶ್ರೋಣಿನರದ) ಹಿಂಬೇರುಗಂಟಿನ ಕೆಲವು ಕಣಗಳನ್ನು ಚೋದಿಸುತ್ತದೆ. ಈ ಕಣಗಳಲ್ಲಿ ಹುಟ್ಟಿದ ನವಶಕ್ತಿ ಆ ಮಟ್ಟದಲ್ಲಿ ಹಿಂದಿನ ಕೊಂಬಿನಲ್ಲಿರುವ ಕಣಗಳನ್ನು ಪ್ರಚೋದಿಸುತ್ತದೆ. ಇವು ಆ ಮಟ್ಟದ ಮುಂದಿನ ಕೊಂಬಿನ ಕಣಗಳನ್ನು ಪ್ರಚೋದಿಸಿ ಮುಳ್ಳುಚುಚ್ಚಿದ ಸಂಗತಿ ಅರಿವಿಗೆ ಬರುವಷ್ಟರಲ್ಲಿ ಕಾಲನ್ನು ಹಿಂದೆ ಎಳೆಯುವಂತೆ ಮಾಡುತ್ತವೆ. ನರತಂತುಗಳನ್ನು ದೂರವಾಣಿ ತಂತಿಗಳಿಗೆ ಹೋಲಿಸಿದರೆ ಮಿದುಳುಬಳ್ಳಿಯನ್ನು ಒಂದು ದೂರವಾಣಿ ವಿನಿಮಯ ಕೇಂದ್ರಕ್ಕೆ ಹೋಲಿಸಬಹುದು. ಮಿದುಳುಬಳ್ಳಿ ಒಂದು ಕಡೆ ದೇಹದ ಎಲ್ಲ ವಿಧ ಸೂಕ್ಷ್ಮಭಾಗಗಳೊಡನೆಯೂ ಮತ್ತೊಂದು ಕಡೆ ಕೇಂದ್ರ ಕಛೇರಿಯಂತಿರುವ ಮಿದುಳಿನೊಡನೆಯೂ ಸಂಬಂಧಪಡೆದಿದೆ.

	ಮಿದುಳುಬಳ್ಳಿಯ ನರತಂತುಮಾರ್ಗಗಳ ಪೈಕಿ ಕೆಲವು ದೇಹದ ಭಾಗಗಳಿಂದ ಮಿದುಳಿಗೆ ಸಮಾಚಾರ ಒಯ್ಯುವ ಆರೋಹಣಮಾರ್ಗಗಳು. ಮಿಕ್ಕವು ಮಿದುಳಿನಿಂದ ಕೆಳಕ್ಕೆ ಆಜ್ಞೆಗಳನ್ನು ಒಯ್ಯುವ ಅವರೋಹಣ ಮಾರ್ಗಗಳು.

	ಹಿಂದಿನ ಬಿಳಿ ಕಂಬದಲ್ಲಿ ಒತ್ತಡ, ಕಂಪನ, ಚಲನಸ್ಥಿತಿ ಮತ್ತು ಸ್ಪರ್ಶನ ಸಮಾಚಾರಗಳನ್ನು ಒಯ್ಯುವ ಆರೋಹಣ ನರತಂತುಗಳಿವೆ. ಮಧ್ಯರೇಖೆಯ ನೇರದಿಂದ ಪಕ್ಕಕ್ಕೆ ಅನುಕ್ರಮವಾಗಿ ಕಾಲು, ಮುಂಡ ಮತ್ತು ತೋಳುಗಳಿಂದ ಬರುವ ಮಾರ್ಗಗಳಿವೆ.

	ಪಕ್ಕದ ಬಿಳಿಕಂಬದಲ್ಲಿ ಒಂದು ಅವರೋಹಣ ಮತ್ತು ಮೂರು ಆರೋಹಣ ಮುಖ್ಯ ಮಾರ್ಗಗಳಿವೆ. ಇವುಗಳಲ್ಲಿ ಆ್ಯಂಟೀರಿಯರ್ ಸ್ಪೈನೊಸೆರಿಬೆಲ್ಲಾರ್ ಟ್ರ್ಯಾಕ್ಟ್ ಮತ್ತು ಪೋಸ್ಟೀರಿಯರ್ ಸ್ಟೈನೊಸೆರಿಬೆಲ್ಲಾರ್ ಟ್ರ್ಯಾಕ್ಟ್ ಎಂಬ ಆರೋಹಣ ಮಾರ್ಗಗಳು ಸ್ನಾಯುಗಳು ಮತ್ತು ಕೀಲುಗಳಿಂದ ಹೊರಡುವ ಸಮಾಚಾರಗಳನ್ನು ಬಳ್ಳಿಯಿಂದ ಸೆರಿಬೆಲ್ಲಮ್ ಎಂಬ ಚಲನ ಸಾಮರಸ್ಯ ಕೇಂದ್ರವಾದ ಅನುಮಸ್ತಿಷ್ಕಕ್ಕೆ ಒಯ್ಯುತ್ತವೆ. ಇವಕ್ಕೆ ಗಾಯವಾದರೆ ಅಥವಾ ರೋಗ ತಗಲಿದರೆ ಚಲನೆಗಳು ಇಚ್ಛಾನುಸಾರ ನಡೆದರೂ ಯದ್ವಾತದ್ವಾ ಇದ್ದು ಇಚ್ಛೆ ಪೂರೈಕೆ ಆಗುವುದಿಲ್ಲ. ಮೂರನೆಯ ಆರೋಹಣ ಮಾರ್ಗವಾದ ಲ್ಯಾಟರಲ್ ಸ್ಪೈನೋತೆಲಮಿಕ್ ಟ್ರ್ಯಾಕ್ಟ್‍ನಲ್ಲಿ ಶಾಖ ಮತ್ತು ನೋವುಗಳ ಸುದ್ದಿಗಳನ್ನು ತೆಲಮಸ್ ಎಂಬ ಮಿದುಳಿನ ಭಾಗಕ್ಕೆ ಒಯ್ಯುವ ತಂತುಗಳಿವೆ. ಲ್ಯಾಟರಲ್ ಸೆರಿಬ್ರೊಸ್ಪೈನಲ್ ಟ್ರ್ಯಾಕ್ಟ್ ಎಂಬ ಅವರೋಹಣ ಮಾರ್ಗ ಮಿದುಳಿನ ಇಚ್ಛಾಕೇಂದ್ರದಿಂದ ಬಳ್ಳಿಗೆ ಇಳಿದು ನಮ್ಮ ಇಚ್ಛೆಗೆ ಅನುಸಾರವಾಗಿ ದೇಹಭಾಗಗಳ ಚಲನೆಗಳನ್ನು ಉಂಟುಮಾಡುತ್ತದೆ. ಇದಕ್ಕೆ ರೋಗ ಅಥವಾ ಗಾಯವಾದರೆ ಅದೇ ಪಕ್ಕದಲ್ಲಿ ಪಾಶ್ವವಾಯು ಬಡಿಯುವುದು.

	ಮುಂದಿನ ಬಿಳಿ ಕಂಬದಲ್ಲಿ ಆ್ಯಂಟೀರಿಯರ್ ಸೆರಿಬ್ರೊಸ್ಪೈನಲ್ ಟ್ರ್ಯಾಕ್ಟ್ ಎಂಬ ಇಚ್ಛಾಚಲನೆಗೆ ಸಂಬಂಧಿಸಿದ ಅವರೋಹಣ ಮಾರ್ಗವೂ ಆ್ಯಂಟೀರಿಯರ್ ಸ್ಪೈನೊತೆಲಮಿಕ್ ಟ್ರ್ಯಾಕ್ಟ್ ಎಂಬ ಸ್ಪರ್ಶ ಮತ್ತು ಒತ್ತಡದ ಸುದ್ದಿಗಳನ್ನು ಒಯ್ಯುವ ಆರೋಹಣ ಮಾರ್ಗವೂ ಮುಖ್ಯವಾದವು.	
(ಎಂ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ